Tuesday, April 17, 2007

ನನ್ನ ಮೊದಲ ಮಾತು......

ಚಿಲಿಪಿಲಿಗುಟ್ಟುತ್ತಿರುವ ದೊಡ್ಡಾಲದ ಮರದಲ್ಲಿ ಎಲ್ಲಾ ಹಕ್ಕಿಗಳು ಜೋರಾಗಿ ಚಿಲಿಪಿಲಿಗುಟ್ಟುತ್ತಿವೆ ಆದರೆ ಅವುಗಳಿಂದ ದೂರದ ಒಂದು ಕೊಂಬೆಯಲ್ಲಿ ಕುಳಿತ ಹಕ್ಕಿ ಮಾತ್ರ ಮೌನವಾಗಿದೆ ಪೆಚ್ಚಾಗಿದೆ ಏಕೆ ಎಂದು ಕೇಳುವ ವ್ಯವಧಾನ ಅಲ್ಲಿದ್ದ ಯಾವುದಕ್ಕು ಇಲ್ಲ ಏಕೆಂದರೆ ಅವುಗಳ ಆಯಸ್ಸು ಕಡಿಮೆ ಅಷ್ಟರೊಳಗೆ ಸಿಗುವ ಸಂತಸ ಅನುಭವಿಸಲು ಅವು ನಿರ್ಧರಿಸಿವೆ ಅವುಗಳ ಪಾಡು ಮಾತ್ರ ಅವಕ್ಕೆ ಅದು ಸತ್ಯವೂ ಹೌದಲ್ಲವೆ?? ಆದರು ಆ ಹಕ್ಕಿ ಏಕೆ ಮೌನ ಮಾತು ಬಾರದೇ?? ಗೊತ್ತಿಲ್ಲ....

22 ವಸಂತಗಳ ಕಳೆದಾಯ್ತು ಈಗ ಹಿಂದೆ ತಿರುಗಿ ನೋಡಿದರೆ ಹಾದಿ ಮಸುಕು ಮಸುಕು,ಅದರಲ್ಲಿ ಬಹಳಷ್ಟು ಅರಿವಿರದೆ ನಡೆದ ಜೀವನವಾಗಿತ್ತು.ಅರಿವು ಮೂಡಿದ ನಂತರದ ಜೀವನದಲ್ಲಿ ಪರರ ಮಾತುಭಾವಗಳಿಗೆ ವಿಧಿಯಾಟಕ್ಕೆ ನನ್ನ ಭಾವನೆಗಳು ಮುಚ್ಹಿ ಹೋದವು.ನನ್ನ ಹಾದಿಯಿನ್ನು ನನಗೆ ಸಿಕ್ಕಿಲ್ಲ ನಡುವೆ ನನ್ನ ಭವಿತವ್ಯವ ಉಳಿಸಲೊಂದು ಜೀವವಾಸರೆ ನೀಡಿದೆ.ಆ ಆಸರೆಯ ಅಕ್ಕರೆಯಲ್ಲಿ ಬದುಕು ಗಾಳಿ ಬೀಸಿದೆಡೆ ಸಾಗುತ್ತಿದೆ.
ನನ್ನ ಬಗ್ಗೆ ಹೇಳಬೇಕೆಂದರೆ ನಾನೊಬ್ಬ ಮೌನಿ,ಸಂಕೋಚದ ಪ್ರಾಣಿ,ಮಧ್ಯಮ ವರ್ಗದ ಓದಿನ,ಅತಿ ಚಿಕ್ಕ ಬಳಗದ (ಮನಸಲ್ಲಿ ಅವರು ಶಾಶ್ವತ) ಹುಡುಗ.ಎಷ್ಟು ಮೌನಿ ಅಂದರೆ ಮನೆಯಲ್ಲಿ ಇಡೀ ಕುಟುಂಬ ಒಂದೆಡೆ ಸೇರಿದರೆ ನಾನು ಯಾರು ಇಲ್ಲದ ಜಾಗದಲ್ಲಿ ನನ್ನ ಕಲ್ಪನೆಯಲ್ಲಿ ಮುಳುಗಿರ್ತೀನಿ.
ನನ್ನದು ಹಿಮ್ಮುಖ ಚಿಂತನೆ ,ಜನ ಸಂತೆಯ ನಡುವೆ ನಡೆಯುವಾಗ ನನಗೆ ಒಂದು ರೀತಿಯ ಏಕಾಂತ ಸಿಗುತ್ತೆ ಅದು ತುಂಬಾನೆ ಇಷ್ಟ.
ಸದ್ಯಕ್ಕೆ ಬದುಕು ಅನ್ವೇಷಣೆ ಕಾದಂಬರಿಯ ರೀತಿ ರೈಲ್ವೆ ಇಂಜಿನ್ ಆಗಿದೆ ,ಬಸ್ ಕೂಡ ಬೇಡ ನನಗಿಷ್ಟ ಬಂದಂತೆ ನಡೆಯುವ ಕಾಲ ಒದಗಿದರೆ ಸಾಕು ಕಾಯಬೇಕು.....
ಹೂವು ಅರಳಿ, ಕಾಯಾಗಿ, ಹಣ್ಣಾಗಿ ಅದರಲ್ಲಿ ಬೀಜ ಮೊಳೆಯುತ್ತೆ ಆದರೆ ಆ ಬೀಜ ಟಿಸಿಲು ಒಡೆಯೋದು ಇನ್ನೆಲ್ಲೊ ಅದರಿಷ್ಟ ಬಂದೆಡೆ ಅದು ಬೆಳೆಯೋಲ್ಲ ಅದರಂತೆಯೇ ಈ ನನ್ನ ಜೀವನ...
ದಿನಚರಿ ಅಂತ ಬರೆಯೊಲ್ಲ ಮನಸ್ಸಿಗೆ ಅನ್ನಿಸಿದ್ದೆಲ್ಲಾ ಬರೀತಿರ್ತೀನಿ.ನಾನೇನೆ ಬರೆದರು ಅದು ಮನಸಿನ ಭಾವನೆಗಳು,ಕಲ್ಪನೆಗಳು ಅಷ್ಟೆ.ನನ್ನಲ್ಲೆ ನಾ ಬರೆದುಕೊಂಡ ೫-೬ ಡೈರಿಗಳಿವೆ.ನೂರಾರು ಪತ್ರಗಳಿವೆ.

ಆದರೆ ಈ ಕಂಪ್ಯೂಟರ್ ಮುಂದೆ ಕೂತು ಓದಿ ಓದಿ ನಾನು ಬರೆಯಲಾ ಎಂಬ ಭಾವ ಹಣ್ಣಾಗಿ ಈಗ ಕಾಲ ಕೂಡಿ ಬಂದಿದೆ.ಅನ್ನಿಸದ್ದನ್ನು ಬರೆಯುವೆ,ಕಲ್ಪಿಸಿದ್ದು,ಅನುಭವಿಸಿದ್ದು,ಕಂಡಿದ್ದು ಆಕರ್ಷಣೆ ಇರುತ್ತೋ ಇಲ್ವೋ ಗೊತ್ತಿಲ್ಲ.ಬರೆಯುವುದಷ್ಟೆ ಕಾಯಕ...